ನಮ್ಮ ಬಗ್ಗೆ

ನಮ್ಮ ಬಗ್ಗೆ

ಪರಶುರಾಮ ಸೃಷ್ಟಿಯ ನಾಡು, ದಕ್ಷಿಣ ಕನ್ನಡ ಜಿಲ್ಲೆ, ಪಡುವಣ ಕಡಲಿನ ನಡುವೆ ಇರುವ ದೇವಸ್ಥಾನಗಳ ನಾಡೆಂದು ಜನಪ್ರಿಯಗೊಂಡ ಜಿಲ್ಲೆ. ಪಶ್ಚಿಮ ಘಟ್ಟದ ನೇತ್ರಾವತಿ, ಫಲ್ಗುಣಿ, ಶಾಂಭವಿ, ಕುಮಾರಧಾರಾ ನದಿಗಳಿಂದ ಫಲವತ್ತೆಯನ್ನು ಕಂಡ ಋಷಿ ಪರಂಪರೆಯ ಭೂಮಿಯಾಗಿದೆ. ಭಕ್ತಿಭಾವದಿಂದ ಭಾವೈಕ್ಯತೆಯನ್ನು ಸಾರಿದ ಧರ್ಮ ಸಮನ್ವಯದ ಪುಣ್ಯ ಭೂಮಿ. ಹಿಂದೂ ಧರ್ಮದ ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಬ್ರಹ್ಮ ಮುಂತಾದ ಆರಾಧನಾ ಕ್ರಮದಿಂದ ಇಡೀ ಜಿಲ್ಲೆ ಆರಾಧಾನಾಲಯಗಳ ತಾಣ ಎಂದು ಜನಜನಿತವಾಗಿದೆ. ತುಳುವ ಸಂಸ್ಕತಿಯ ನಾಗತಂಬಿಲ, ಕೊರಗತನಿಯ, ಕೋರ್ದಬ್ಬು ತನ್ನಿಮಾನಿಗ, ಕಾನದ ಕಟದ, ಪಂಜುರ್ಲಿ, ಕಲ್ಕುಡ ಕಲ್ಲುರ್ಟಿ, ಬೈದರ್ಕಳ ಮುಂತಾದ ದೈವಗಳ ಕೋಲ ನೇಮಗಳ ಆವಾಸಸ್ಥಾನವು ಹೌದು. ಧಾರ್ಮಿಕ-ಸಾಂಸ್ಕತಿಕ ಅನಾವರಣದಿಂದ ಧರ್ಮಜೀವನಕ್ಕೆ ಭವ್ಯವಾದ ತಳಹದಿ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಭಕ್ತಿಪರವಶತೆಯ ಜೊತೆ ಆನಂದದ ಅನುಭೂತಿಯನ್ನು ತಂದುಕೊಡುವ ಪ್ರದೇಶವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳು ಪ್ರಸ್ತುತ ನೂತನ ಕಾಯ್ದೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 ಮತ್ತು ನಿಯಮಗಳು 2002, ಅದರಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನೂತನ ಕಾಯ್ದೆ ಜಾರಿಗೆ ಬರುವ ಮುನ್ನ ಜಿಲ್ಲೆಯ ದೇವಸ್ಥಾನಗಳು ಮದ್ರಾಸು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ 1951 ರಡಿ ಕಾರ್ಯನಿರ್ವಹಿಸಲ್ಪಡುತ್ತಿದ್ದವು. ಜಿಲ್ಲೆಯ ದೇವಾಲಯಗಳನ್ನು ಅವುಗಳ ಆದಾಯ ಮಿತಿಗನುಗುಣವಾಗಿ ಪ್ರವರ್ಗ ‘ಎ’, ‘ಬಿ’ ಹಾಗೂ ‘ಸಿ’ ಎಂದು ವರ್ಗೀಕರಿಸಲಾಗಿರುತ್ತದೆ. ಪ್ರವರ್ಗಗಳಿಗನುಸಾರವಾಗಿ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು, ಆಡಳಿತದ ಮೇಲ್ವಿಚಾರಕರಾಗಿರುತ್ತಾರೆ. ಸ್ಥಳೀಯವಾಗಿ ಧಾರ್ಮಿಕ ಸಂಸ್ಥೆಗಳ ಆಡಳಿತವನ್ನು ಕಾಯ್ದೆಯ ಸೆಕ್ಷನ್ 25 ಮತ್ತು 25ಎ ರಡಿ ವ್ಯವಸ್ಥಾಪನಾ ಮಂಡಳಿ/ಅನುವಂಶಿಕ ಆಡಳಿತ ವರ್ಗ, ಕಾರ್ಯನಿರ್ವಹಣಾಧಿಕಾರಿಗಳು ನಿರ್ವಹಿಸುತ್ತಾರೆ.

ಸದ್ರಿ ಅಧಿಸೂಚಿತ ಸಂಸ್ಥೆಗಳ ವಿವರಗಳು ಈ ಕೆಳಗಿನಂತಿವೆ:-

ತಾಲೂಕು ಪ್ರವರ್ಗ ‘ಎ’ ಗೆ ಸೇರಿದ ದೇವಸ್ಥಾನಗಳು ಪ್ರವರ್ಗ ‘ಬಿ’ ಗೆ ಸೇರಿದ ದೇವಸ್ಥಾನಗಳು ಪ್ರವರ್ಗ ‘ಸಿ’ ಗೆ ಸೇರಿದ ದೇವಸ್ಥಾನಗಳು ಒಟ್ಟು ಅಧಿಸೂಚಿತ ಪಟ್ಟಿಯಿಂದ ಕೈಬಿಡಲಾದ ದೇವಸ್ಥಾನಗಳ ಸಂಖ್ಯೆ
ಮಂಗಳೂರು 19 22 153 194 3
ಬಂಟ್ವಾಳ 6 7 86 99 1
ಪುತ್ತೂರು 3 5 74 82 -
ಬೆಳ್ತಂಗಡಿ 3 8 57 68 -
ಸುಳ್ಯ 5 2 46 53 1
ಒಟ್ಟು 36 44 416 496 5 496   -  5  =  491

ಜಿಲ್ಲಾ ಧಾರ್ಮಿಕ ಪರಿಷತ್:-

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಾಯ್ದೆ 25 ರನ್ವಯ ಅಧಿಸೂಚಿತ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯವು ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮೀರಿದ್ದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು, ಮತ್ತು ವಾರ್ಷಿಕ ಆದಾಯವು ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮೀರದಿದ್ದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು, ಭಕ್ತರ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಅನುಯಾಯಿಗಳ ಹಾಗೂ ಧರ್ಮಾದಾಯ ಸಂಸ್ಥೆಗಳ ಫಲಾನುಭವಿಗಳ ಪೈಕಿಯಿಂದ ಒಂಬತ್ತು ಜನ ಸದಸ್ಯರನ್ನು ಮೀರದ ಒಂದು ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗುತ್ತದೆ.

ವ್ಯವಸ್ಥಾಪನಾ ಸಮಿತಿ ರಚನೆಯಾಗಿರುವ ವಿವರ:

ಪ್ರವರ್ಗ “ಎ” ಪ್ರವರ್ಗ “ಬಿ” ಪ್ರವರ್ಗ “ಸಿ” ಒಟ್ಟು
21 29 168 218

ರಿಜಿಸ್ಟರು ಇತ್ಯಾದಿಗಳ ನಿರ್ವಹಣೆ:-

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002 ರ ಸೆಕ್ಷನ್ 35 ರಂತೆ ಅಧಿಸೂಚಿತ ಸಂಸ್ಥೆಗಳು ತಮ್ಮ ತಮ್ಮ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ನಮೂನೆಗಳ ಪ್ರಕಾರ ನಗದು ಪುಸ್ತಕ, ಖಾತಾ ಪುಸ್ತಕ, ದಾಸ್ತಾನು ರಿಜಿಸ್ಟರ್, ವೇತನ ಸಂದಾಯ ರಿಜಿಸ್ಟರ್, ಠೇವಣಿಗಳ ರಿಜಿಸ್ಟರ್, ಹುಂಡಿ ರಿಜಿಸ್ಟರ್, ದಿಟ್ಟಂ ರಿಜಿಸ್ಟರ್, ಸೇವಾ ರಿಜಿಸ್ಟರ್, ನೌಕರರ ರಿಜಿಸ್ಟರ್, ಆಭರಣಗಳ ರಿಜಿಸ್ಟರ್, ಲೆಕ್ಕ ಪತ್ರಗಳ ರಿಜಿಸ್ಟರ್, ಹಾಗೂ ಇತ್ಯಾದಿಗಳನ್ನು ನಿರ್ವಹಿಸಲಾಗುತ್ತದೆ.

ಆರಾಧನಾ ಯೋಜನೆ :

ಆರಾಧನಾ ಯೋಜನೆಯಡಿ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡುತ್ತಿದ್ದು, ಸದ್ರಿ ಅನುದಾನದ ಮೊತ್ತವನ್ನು ಜಿಲ್ಲಾಧಿಕಾರಿಯವರ ಕಛೇರಿಯ ಮೂಲಕ ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ವಿಧಾನ ಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗುತ್ತದೆ. ಈ ಯೋಜನೆಯು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಲಂಬಾಣಿ ತಾಂಡ, ವಡ್ಡರಕೇರಿ, ಹಿಂದುಳಿದ 1 ನೇ ವರ್ಗ ಮತ್ತು ಅಲ್ಪ ಸಂಖ್ಯಾತ ವರ್ಗಗಳಿಗೆ ಸೇರಿದ ಜನರು ವಾಸಿಸುವ ಸ್ಥಳಗಳಲ್ಲಿ ದೇವಾಲಯ, ಪೂಜಾ ಮಂದಿರ ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ಥಿ ಜೀರ್ಣೊದ್ಧಾರ ಹಾಗೂ ನವ ನಿರ್ಮಾಣಗಳಿಗೆ ಬಿಡುಗಡೆ ಮಾಡಲಾಗುತ್ತದೆ. ರಿಪೇರಿ ಮತ್ತು ಜೀರ್ಣೋದ್ಧಾರ ರೂ. 50,000.00, ಪ್ರಸ್ತುತ ಇರುವ ಕಟ್ಟಡವನ್ನು ಅಭಿವೃದ್ಧಿ ಪಡಿಸುವುದು, ಹೊರ ಪ್ರಾಕಾರ ನಿರ್ಮಿಸುವುದು, ಸ್ಥಳಾವಕಾಶವಿದ್ದಲ್ಲಿ ಪ್ರಾರ್ಥನಾ ಮಂದಿರ ಭಜನಾ ಮಂದಿರ, ಧ್ಯಾನ ಮಂದಿರ ನಿರ್ಮಾಣಕ್ಕೆ ರೂ. 1.00 ಲಕ್ಷ, ಹೊಸದಾಗಿ ಪೂಜಾ ಸ್ಥಳ, ಭಜನಾ ಮಂದಿರ, ಪ್ರಾರ್ಥನಾ ಮಂದಿರಗಳ ನವ ನಿರ್ಮಾಣಕ್ಕೆ ರೂ. 1.75 ಲಕ್ಷ ಮೊತ್ತವನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.

ಸಾಮಾನ್ಯ ಅನುದಾನ:

ದೇವಸ್ಥಾನಗಳ ಜೀರ್ಣೋದ್ದಾರದ ಬಗ್ಗೆ ಮುಜರಾಯಿ ಮತ್ತು ಮುಜರಾಯೇತರ ಸಂಸ್ಥೆಗಳಿಗೆ ಸರಕಾರ ಮಂಜೂರು ಮಾಡುವ ಅನುದಾನವನ್ನು ಜಿಲ್ಲಾಧಿಕಾರಿಯವರ ಮೂಲಕ ಬಿಡುಗಡೆಗೊಳಿಸಲಾಗುತ್ತದೆ. ಸದ್ರಿ ಅನುದಾನವನ್ನು ಸರಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ಸಾಮಾನ್ಯ ಸಂಗ್ರಹಣಾ ನಿಧಿ ಯೋಜನೆ:

ಸದ್ರಿ ಯೋಜನೆಯಡಿ ಪ್ರವರ್ಗ ‘ಸಿ’ ಗೆ ಸೇರಿದ ಸಂಸ್ಥೆಗಳಿಗೆ ಅಭಿವೃದ್ದಿ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಅನುದಾನ ಮಂಜೂರು ಮಾಡುತ್ತಿದ್ದು, ಅದನ್ನು ಜಿಲ್ಲಾಧಿಕಾರಿಯವರ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಯಾವ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯವು ಹತ್ತು ಲಕ್ಷ ರೂಪಾಯಿಗಳನ್ನು ಮೀರುವುದೋ ಆ ಸಂಸ್ಥೆಗಳಿಗೆ ಸಂಬಂಧಪಟ್ಟ ನಿವ್ವಳ ಆದಾಯದ ಶೇಕಡಾ ಹತ್ತರಷ್ಟು, ಹಾಗೂ ಯಾವ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯವು ಐದು ಲಕ್ಷ ರೂಪಾಯಿಗಳನ್ನು ಮೀರಿದ್ದು, ಆದರೆ ಹತ್ತು ಲಕ್ಷ ರೂಪಾಯಿಗಳನ್ನು ಮೀರಿರುವುದಿಲ್ಲವೋ ಆ ಸಂಸ್ಥೆಗಳಿಗೆ ಸಂಬಂಧಪಟ್ಟ ನಿವ್ವಳ ಆದಾಯದ ಶೇಕಡಾ ಐದರಷ್ಟು ಮೊತ್ತವನ್ನು ನೀಡಲಾಗುವುದು.

ಜೀರ್ಣೋದ್ಧಾರ ಸಮಿತಿ ರಚನೆ :

ದೇವಸ್ಥಾನಗಳಲಿ ಅಭಿವೃದ್ಧಿ ಕಾಯ ಕೈಗೊಳ್ಳುವ ಬಗ್ಗೆ ರಚಿಸಲಾಗುವ ಜೀರ್ಣೋದ್ಧಾರ ಸಮಿತಿಗೆ ನಿಯಮ 40(ಬಿ) ಪ್ರಕಾರ ಮಂಜೂರಾತಿಯನ್ನು ನೀಡಲಾಗುತ್ತದೆ.

ತಸ್ತೀಕು :

ಪ್ರತಿ ವರ್ಷ ಸರಕಾರವು ಅನುಮೋದಿತ ಧಾರ್ಮಿಕ ಸಂಸ್ಥೆಗಳಿಗೆ ತಸ್ತೀಕು ನೀಡಲಾಗುತ್ತದೆ. ಅದನ್ನು ಜಿಲ್ಲಾಧಿಕಾರಿಯವರು ತಹಶೀಲ್ದಾರರ ಮೂಲಕ ಸಂಬಂಧಪಟ್ಟ ಸಂಸ್ಥೆಗಳ ಆಡಳಿತದಾರರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಯೋಜನೆ :

ಸದ್ರಿ ಯೋಜನೆಯಡಿ ಪರಿಶಿಷ್ಟ ಜಾರಿಯವರು ಹಾಗೂ ಪಂಗಡದವರು ವಾಸಿಸುವ ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರ ಹಾಗೂ ಸಮುದಾಯ ಭವನವನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಸರಕಾರವು ಅನುದಾನವನ್ನು ಜಿಲ್ಲಾಧಿಕಾರಿಯವರ ಮೂಲಕ ಬಿಡುಗಡೆಗೊಳಿಸಲಾಗುತ್ತದೆ.

ಜಿಲ್ಲಾ ಮಟ್ಟದ ಆಡಳಿತ

Team
ಸಸಿಕಾಂತ್ ಸೆಂಥಿಲ್ ಎಸ್. , ಭಾಆಸೇ

ಭಾಆಸೇ

ಜಿಲ್ಲಾಧಿಕಾರಿಗಳು ಮತ್ತು

ಜಿಲ್ಲಾ ಮ್ಯಾಜಿಸ್ಟ್ರೇಟ್

Team
ಕುಮಾರ, ಕೆಎಎಸ್

ಅಪರ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ , ಮಂಗಳೂರು

Team
ಪ್ರಮೀಳಾ ಎಮ್. ಕೆ., ಕೆಎಎಸ್ ,

ಕೆಎಎಸ್

ಸಹಾಯಕ ಆಯುಕ್ತರು

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ದಕ್ಷಿಣ ಕನ್ನಡ, ಮಂಗಳೂರು.

ಮುಜಾರಾಯಿ

ದಕ್ಷಿಣ ಕನ್ನಡ ಜಿಲ್ಲೆಯ ಉಪ ಕಮೀಷನರ್, ದಕ್ಷಿಣ ಕನ್ನಡದ ಮುಜಾರಾಯಿ ಅಧಿಕಾರಿ ಮತ್ತು ಜಿಲ್ಲೆಯ ಎಲ್ಲಾ ಮುಜಾರಾಯಿ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ವಹಿಸುತ್ತಾನೆ. ಮುಜಾರಾಯಿ ವಿಷಯಗಳ ಬಗ್ಗೆ ಮಂಗಳೂರಿನ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟಬಲ್ ದತ್ತಿಗಳ ಆಯುಕ್ತರಿಗೆ ಅವರು ಜವಾಬ್ದಾರರಾಗಿರುತ್ತಾರೆ. ಅವರು ಕರ್ನಾಟಕದ ನಿಬಂಧನೆಗಳನ್ನು ಅನುಸಾರವಾಗಿ ತನ್ನ ನ್ಯಾಯ ವ್ಯಾಪ್ತಿಗಳಲ್ಲಿ ಮುಜಾರಾಯಿ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 491 ಸೂಚನಾ ಸಂಸ್ಥೆಗಳಿವೆ. ಈ ಸಂಸ್ಥೆಗಳು A, B, C ವರ್ಗಗಳಾಗಿ ವರ್ಗೀಕರಿಸಲ್ಪಟ್ಟಿವೆ.

ಜಿಲ್ಲಾ ಮಟ್ಟದಲ್ಲಿ ಉಪ ಆಯುಕ್ತರು

 • ದತ್ತಿ ಸಹಾಯಕರು
  1. 1. ಪ್ರಥಮ ದರ್ಜೆ ಸಹಾಯಕರು

  2. 2. ದ್ವಿತೀಯ ದರ್ಜೆ ಸಹಾಯಕರು

  3. 3. ಬೆರಳಚ್ಚುಗಾರರು

 • ಸಹಾಯಕ ಆಯುಕ್ತರು ( ಮಂಗಳೂರು )
  1. 1. ಅಧೀಕ್ಷಕರು

  2. 2. ಪ್ರಥಮ ದರ್ಜೆ ಪರಿವೀಕ್ಷಕರು

  3. 3. ಪ್ರಥಮ ದರ್ಜೆ ಶೀಘ್ರ ಲಿಪಿಗಾರರು

  4. 4. ವಾಹನ ಚಾಲಕರು

  5. 5. ಗ್ರೂಪ್ ಡಿ